ನಾಮುರ್
	ಬೆಲ್ಜಿಯಂ ದೇಶದ ಆಗ್ನೇಯ ಭಾಗದಲ್ಲಿರುವ ಪ್ರಾಂತ್ಯ. ಫ್ರೆಂಚ್ ಗಡಿಯ ಉತ್ತರದಲ್ಲಿದೆ. ಇದರ ಪಶ್ಚಿಮಕ್ಕೆ ಹೆನೋ ಪ್ರಾಂತ್ಯವೂ, ಪೂರ್ವಕ್ಕೆ ಲುಕ್ಸೆಂಬರ್ಗ್ ಪ್ರಾಂತ್ಯವೂ ಇವೆ. ವಿಸ್ತೀರ್ಣ 3660 ಚ.ಕಿ.ಮಿ. ಜನಸಂಖ್ಯೆ 3,85,705(1973). ಇಲ್ಲಿಯ ಮುಖ್ಯ ನದಿಗಳು ಮ್ಯೂಸ್, ಸ್ಯಾಂಬ್ರೆ ಮತ್ತು ಲೆಸ್. ಈ ಪ್ರಾಂತ್ಯವನ್ನು ಆಡಳಿತಕ್ಕಾಗಿ ನಾಮುರ್, ದೀನಾ ಮತ್ತು ಫಿಲಿಪ್‍ವಿಲ್ (ಸ್ಕೀಕಡ್) ಎಂಬ ಮೂರು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಪ್ರಾಂತ್ಯದ ಆಡಳಿತ ಕೇಂದ್ರ ನಾಮುರ್. ಜನರ ಮುಖ್ಯ ಭಾಷೆ ಫ್ರೆಂಚ್. ಹಿಂದೆ ಈ ಪ್ರಾಂತ್ಯದ ಪೂರ್ವ ಭಾಗ ಲೀಯಷ್‍ನ ಪ್ರಿನ್ಸ್ ಬಿಷಪ್‍ಗಳಿಗೆ ಸೇರಿತ್ತು. ಉತ್ತರ ಭಾಗ ನಾಮುರ್ ಕೌಂಟಿಯಾಗಿತ್ತು. ಇದನ್ನು 1118 ರಲ್ಲಿ ಹೋನೋ ಪ್ರಾಂತ್ಯಕ್ಕೆ ಸೇರಿಸಲಾಗಿತ್ತು. 1963 ರಲ್ಲಿ ಇದು ಫ್ಲಾಂಡರ್ಸ್‍ಗೆ ಸೇರಿತ್ತು. 1421 ರಲ್ಲಿ ಇದನ್ನು ಬರ್ಗಂಡಿಯ ಡ್ಯೂಕರಿಗೆ ಮಾರಲಾಯಿತು.

	ಉತ್ತರದಲ್ಲಿರುವ ಹೆಸ್ಬೇ ಪ್ರಸ್ತಭೂಮಿಯ ನೆಲ ಫಲವತ್ತಾದದ್ದು. ಇಲ್ಲಿ ಗೋದಿ, ಸಕ್ಕರೆ ಬೀಟ್, ಮೇವು, ಹಣ್ಣು ಬೆಳೆಯುತ್ತದೆ. 

	ಸ್ಯಾಂಬ್ರೆ ಮತ್ತು ಮ್ಯೂಸ್ ನದಿಗಳ ಕಣವೆಗಳ ವಾಯುಗುಣವೂ, ಫಲವತ್ತಾದ ಮಣ್ಣು ಕೃಷಿಗೆ ತುಂಬಾ ಅನುಕೂಲಕರವಾಗಿದೆ. ಇಲ್ಲಿ ಮಿಶ್ರ ವ್ಯವಸಾಯ ಮತ್ತು ಹೈನುಗಾರಿಕೆ ಅಭಿವೃದ್ದಿ ಹೊಂದಿದೆ. ಪ್ರಾಂತ್ಯದ ಆಗ್ನೇಯದಲ್ಲಿರುವ ಕಾಂಡ್ರೋಜ್, ನೈಋತ್ಯ ಭಾಗ ಇವು ಬಂಡೆಗಳಿಂದ ಕೂಡಿದ ಪ್ರಸ್ಥ ಭೂಮಿಗಳು. ಇಲ್ಲಿಯ ಬೆಟ್ಟಗಳ ಮೇಲೆ ಕಾಡು ಬೆಳೆದಿದೆ. ಕಣಿವೆಗಳಲ್ಲಿ ಗೋಧಿ, ಬಾರ್ಲಿ, ರೈ, ಆಲೂಗಡ್ಡೆ, ಮೆವು, ಅಗಸೆನಾರು ಬೆಳೆಯುತ್ತವೆ. ಹೈನುಗಾರಿಕೆ ಮತ್ತು ಪಶುಸಂಗೋಪನೆಯ ಜೊತೆಗೆ ಕುದುರೆಗಳನ್ನು ಸಾಕುವುದು ಮುಖ್ಯ ಕಸುಬು. ಈ ಪ್ರಸ್ಥಭೂಮಿಗಳ ದಕ್ಷಿಣಕ್ಕೆ ಇರುವ ತಗ್ಗು ನೆಲದಲ್ಲಿ ಕಾಡುಗಳು ಗೋಮಾಳಗಳು ಇವೆ. ಸ್ಯಾಂಬ್ರೆ ಮತ್ತು ಮ್ಯೂಸ್ ನದಿಬಯಲುಗಳಲ್ಲಿ ದಕ್ಷಿಣಬೆಲ್ಜಿಯಂನ ಪ್ರಧಾನ ಕೈಗಾರಿಕೆಗಳಿವೆ. ಉಕ್ಕು, ರಾಸಾಯನಿಕ, ಗಾಜಿನ ಸಾಮಾನುಗಳ ತಯಾರಿಕೆ ಇವು ಇಲ್ಲಿನ ಮುಖ್ಯ ಕೈಗಾರಿಕೆಗಳು. ಕಾಂಡ್ರೋಜ್ ಪ್ರದೇಶದಲ್ಲಿ ಸುಣ್ಣ, ಗ್ರಾನೈಟ್, ಬಳಪದಕಲ್ಲು, ಮರಳುಗಲ್ಲುಗಳನ್ನು ತೆಗೆಯುತ್ತಾರೆ.

	ನಾಮುರ್ ಪ್ರಾಂತ್ಯದಲ್ಲಿರುವ ಹಲವು ರೈಲುಮಾರ್ಗಗಳ ಜೊತೆಗೆ ಮ್ಯೂಸ್ ಮತ್ತು ಸ್ಯಾಂಬ್ರೆ ನದಿಗಳಿಗೆ ಕಾಲುವೆಗಳನ್ನು ತೋಡಲಾಗಿದೆ. ಪ್ರಮುಖ ಪಟ್ಟಣಗಳು ನಾಮುರ್, ದೀನಾನ್, ಸೀನೆ, ಫಿಲಿಪ್‍ವಿಲ್ ಮತ್ತು ಷಾಂಬ್ಲೂ ನದಿಗಳ ಅಂಚುಗಳಲ್ಲಿರುವ ಬಂಡೆಗಳ ವಿಚಿತ್ರ ರೂಪುಗಳೂ, ಪ್ರಾಂತ್ಯದಲ್ಲಿರುವ ಪ್ರಾಚಿನ ಕೋಟೆಗಳೂ, ಕ್ರೈಸ್ತ ದೇವಾಲಯಗಳು ಪ್ರವಾಸಿಗಳನ್ನು ಆಕರ್ಷಿಸುತ್ತವೆ.

	ನಾಮುರ್ ಪಟ್ಟಣ ಈ ಪ್ರಾಂತ್ಯದ ಆಡಳಿತ ಕೇಂದ್ರ ಮತ್ತು ಪ್ರಮುಖ ಪಟ್ಟಣ. ಉ.ಅ.5828( ಮತ್ತು ಪೂ.ರೇ.4(52( ಮೇಲೆ, ಬ್ರಸೆಲ್ಸ್ ನಗರಕ್ಕೆ 63ಕಿ.ಮಿ. ದೂರದಲ್ಲಿ ಸ್ಯಾಂಬ್ರೆ ಮತ್ತು ಮ್ಯೂಸ್ ನದಿಗಳ ಸಂಗಮದ ಬಳಿ ಇದೆ. ಜನಸಂಖ್ಯೆ 32,507 (1971).ಇದು 908 ರಿಂದ ನಾಮುರ್ ಕೌಂಟಿಗಳ ಆಡಳಿತ ಸ್ಥಾನವಾಗಿತ್ತು. 1420 ರಲ್ಲಿ ಇದು ಬರ್ಗಂಡಿಗೆ ವರ್ಗವಾಯಿತು. ಫ್ರಾನ್ಸ್‍ಗೆ ಹೋಗುವ ಮಾರ್ಗಗಳ ಹೆಬ್ಬಾಗಿಲಿನಂತಿರುವ ಈ ಪಟ್ಟಣ ಆಯಕಟ್ಟಿನ ದೃಷ್ಟಿಯಿಂದ ಪ್ರಾಮುಖ್ಯ ಪಡೆದಿತ್ತು. ಪಟ್ಟಣದ ಬಳಿ ಸಾಂಬ್ರೆ ನದಿಗೆ ಅರು ಸೇತುವೆಗಳಿವೆ. ಮ್ಯೂಸ್ ನದಿಯ ಎರಡು ಸೇತುವೆಗಳಲ್ಲಿ ಒಂದು 11 ಶತಮಾನದಲ್ಲಿ 5ನೆಯ ಚಾಲ್ರ್ಸ್ ದೊರೆಯ ಕಾಲದಲ್ಲಿ ನಿರ್ಮಾಣವಾಯಿತು. 1962 ರಲ್ಲಿ ಅದನ್ನು ಕೆಡವಿ ಬೇರೆಡೆಯಲ್ಲಿ ಅದೇ ರೀತಿಯ ಸೇತುವೆಯನ್ನು ನಿರ್ಮಿಸಲಾಯಿತು. ಒಂದನೆಯ ಮತ್ತು ಎರಡನೆಯ ಮಹಾಯುದ್ದಗಳ ಕಾಲದಲ್ಲಿ ಈ ಪಟ್ಟಣ ಶತ್ರುಗಳ ದಾಳಿಗೆ ಒಳಗಾಗಿತ್ತು.

	ನಾಮುರ್‍ನಲ್ಲಿರುವ ಪ್ರಾಚೀನ ಕಟ್ಟಡಗಳಲ್ಲಿ ಮುಖ್ಯವಾದುವು ಮೀಟ್‍ಹಾಲ್ (1585). ಹಿಂದೆ ಇದು ಮಾಂಸ ಮತ್ತು ಮೀನು ಮಾರುಕಟ್ಟೆಯಾಗಿತ್ತು. ಈಗ ಇದು ನಗರದ 7 ವಸ್ತುಸಂಗ್ರಹಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಪುರಾವಸ್ತು ಸಂಗ್ರಹಗಳಿವೆ. ಪ್ರಾಚೀನ ಬಿಷಪ್‍ನ ವಸ್ತು ಸಂಗ್ರಹಾಲಯದಲ್ಲಿ ನಾಮುರ್ ಪ್ರಭುಗಳ (13ನೇ ಶತಮಾನ) ಪ್ರಾರ್ಥನಾ ವೇದಿಕೆ ಮತ್ತು ರತ್ನಕಿರೀಟ ಪ್ರದರ್ಶಿತವಾಗಿದೆ.

	ಸೇಂಟ್ ಅಬೇನ್ ಕ್ರೈಸ್ತ ದೇವಾಲಯದಲ್ಲಿ ಶ್ರೇಷ್ಠ ಚಿತ್ರಕಲಾವಸ್ತುಗಳು ಕಬ್ಬಿಣ ಮತ್ತು ಹಿತ್ತಾಳೆಯ ಕಲಾಕೃತಿಗಳು ಇವೆ. ಸೇಂಟ್ ಲೂಪ್ ಕ್ರೈಸ್ತದೇವಾಲಯದಲ್ಲಿ ಮನೋಹರವಾದ ಕೆಂಪುಶಿಲೆಯ ಕಂಬಸಾಲುಗಳಿವೆ.

	ನಾಮುರ್ ಪ್ರಮುಖ ರೈಲ್ವೆ ಜಂಕ್ಷನ್. ಇಲ್ಲಿ ಕಬ್ಬಿಣ, ಉಕ್ಕು, ಸಿಮೆಂಟ್, ಚಕ್ಕಳದ ಸಾಮಾನು, ಗೋಂದು, ಸಾಬೂನು ಮತ್ತು ಕಾಗದದ ಕೈಗಾರಿಕೆಗಳಿವೆ.
(ವಿ.ಗಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ